ಭಗೀರಥ
ಇಕ್ಷ್ವಾಕು ವಂಶದ ದೊರೆ. ದಿಲೀಪನ ಮಗ. ಮಹಾಸಾಹಸಿ. ತನ್ನ ತಾತ ಸಗರ ಚಕ್ರವರ್ತಿಯ ಅರುವತ್ತು ಸಹಸ್ರ ಮಕ್ಕಳು ಮುನಿಶಾಪದಿಂದ ಸುಟ್ಟು ಬೂದಿಯಾಗಿದ್ದು ಸದ್ಗತಿ ಕಾಣದೆ ಇರುವ ಸಂದರ್ಭದಲ್ಲಿ ಈತ ಅವರನ್ನು ಉದ್ಧರಿಸಿದ. ಅದಕ್ಕಾಗಿ ದೇವಗಂಗೆಯನ್ನು ಕುರಿತು ಉಗ್ರವಾಗಿ ತಪಸ್ಸುಮಾಡಿದ. ಅವಳು ಒಪ್ಪಿ ಭೂಮಿಗೆ ಧುಮ್ಮಿಕ್ಕುವಾಗ ಅದರ ರಭಸಕ್ಕೆ ಭೂಮಂಡಲವೇ ಕೊಚ್ಚಿಹೋಯಿತು. ಅದನ್ನು ತಡೆಯಲು ಶಿವನನ್ನು ಒಪ್ಪಿಸಿದ. ಅದರಂತೆ ಧುಮ್ಮಿಕ್ಕುವ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ಧರಿಸಿದ. ಆದರೆ ಗಂಗೆ ಶಿವನ ಜಡೆಯಲ್ಲೇ ಅಡಗಿ ಹೋದಾಗ ಮತ್ತೆ ಭಗೀರಥ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಅವನ ಜಟೆಯಿಂದ ಬಿಡಿಸಿಕೊಂಡು ಬಂದ. ಹೀಗೆ ಗಂಗೆ ಅವತರಿಸುವಾಗ ಜಹ್ನು ಎಂಬ ರಾಜನ ಯಜ್ಞ ಶಾಲೆಯ ಮೇಲೆ ಹರಿದು ಅದು ಕೊಚ್ಚಿಹೋಯಿತು. ಇದ್ದರಿಂದ ಕೋಪಗೊಂಡ ಜಹ್ನು ಆ ಗಂಗೆಯನ್ನು ಆಪೋಶನ ತೆಗೆದುಕೊಂಡ. ಭಗೀರಥನ ಸ್ತೋತ್ರದಿಂದ ಮತ್ತೆ ಗಂಗೆಗೆ ಬಿಡುಗಡೆ ಸಿಕ್ಕಿ ಸಗರಪುತ್ರರ ಬೂದಿ ರಾಶಿಯ ಮೇಲೆ ಹರಿದಳು. ಅವರಿಗೆ ಸದ್ಗತಿ ದೊರಕಿತು. ಹೀಗೆ ನಿರಂತರ ಪ್ರಯತ್ನದಿಂದ ಭಗೀರಥ ತನ್ನ ಪಿತೃಗಳನ್ನು ಉದ್ಧರಿಸಿ ಧನ್ಯನಾದ. ಈ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ.

	ಈತನಿಗೆ ಹಂಸಿಯೆಂಬ ಮಗಳಿದ್ದಳೆಂದೊ ಅವಳನ್ನು ಕೌತ್ಸುಮುನಿ ಮದುವೆಯಾಗಿದ್ದನೆಂದೂ ಧರ್ಮಸ್ವರೂಪ ಮತ್ತು ಅನುಷ್ಠಾನದ ವಿಷಯವಾಗಿ ಭಗೀರಥ ಬ್ರಹ್ಮನೊಂದಿಗೆ ಸಂವಾದ ಮಾಡಿದನೆಂದೂ ಮಹಾಭಾರತದಿಂದ ತಿಳಿದುಬರುತ್ತದೆ.
(ಎ.ಟಿ.ಡಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ